ಕುತೂಹಲ

ಪರಿಸರದಲ್ಲಿ ತನಗರ್ಥವಾಗದ್ದನ್ನು ತಿಳಿಯಲು ವ್ಯಕ್ತಿ ತೋರಿಸುವ ಆಶೆ, ಅಸಕ್ತಿ (ಕ್ಯೂರಿಯಾಸಿಟಿ). ಉನ್ನತವರ್ಗದ ಪ್ರಾಣಿ ಮತ್ತು ಮನುಷ್ಯ ಜೀವಿಗಳಲ್ಲಿ ತೋರಿಬರುವ ಒಂದು ಸಹಜ ಪ್ರವೃತ್ತಿಯಿದು. ಅಪರಿಚಿತ ಸ್ಥಳದಲ್ಲಿ ನಾಯಿ ಹೇಗೆ ವರ್ತಿಸುತ್ತದೆಂಬುದನ್ನು ನೋಡಬಹುದು. ಅತ್ತಿತ್ತ ಸುತ್ತುತ್ತ, ಅಲ್ಲಿನ ವಸ್ತುಗಳನ್ನು ಮೂಸಿನೋಡುತ್ತ, ಹೊಸ ವಾತವರಣದ ಅನ್ವೇಷಣೆಯಲ್ಲಿ ಅದು ಕ್ಷಣದಲ್ಲಿ ಮಗ್ನವಾಗಿಬಿಡುತ್ತದೆ. ಚಿಕ್ಕಮಕ್ಕಳು ಹಿರಿಯರನ್ನು ಕುರಿತು ಯಾವುದಾದರೊಂದು ವಸ್ತು ಅಥವಾ ವಿಚಾರದ ಬಗೆಗೆ ಏನು, ಏಕೆ, ಹೇಗೆ ಮುಂತಾಗಿ ಪ್ರಶ್ನೆಗಳನ್ನು ಹಾಕುವುದರ ಮೂಲಕ ತಮ್ಮ ಕುತೂಹವನ್ನು ಪ್ರದರ್ಶಿಸುತ್ತಾರೆ. ಈ ಕುತೂಹಲಪ್ರವೃತ್ತಿ ಮಾನವನ ನಾಗರಿಕತೆಯ ವಿಕಾಸದ ಹಾದಿಯಲ್ಲಿ ಪ್ರಮುಖ ಪಾತ್ರವಹಿಸಿದೆ. ಆದಿಮಾನವ ಬೆಂಕಿಯನ್ನು ಕಂಡು ಹಿಡಿದಿದ್ದು, ಕೊಲಂಬಸ್ ಅಮೆರಿಕವನ್ನು ಕಂಡುಹಿಡಿದಿದ್ದು, ಆಧುನಿಕ ಮಾನವ ಚಂದ್ರಲೋಕಕ್ಕೆ ಹೋದದ್ದು-ಇವೆಲ್ಲವೂ ಕುತೂಹಲ ಪ್ರೇರಿತ ಅನ್ವೇಷಣೆ, ಸಂಶೋಧನೆಗಳ ಪರಿಣಾಮ, ಸತ್ಫಲ. ಕುತೂಹಲ ಪ್ರವೃತ್ತಿ ಜೀವಿಯ ಅಗತ್ಯಗಳ ಪೂರೈಕೆಗೆ ಸಹಕಾರಿಯಾಗಬಹುದಾದರೂ ಇದನ್ನು ಒಂದು ದೈಹಿಕ ಅಗತ್ಯ ಅಥವಾ ಅವಶ್ಯಕತೆ ಎಂದು ಪರಿಗಣಿಸಲಾಗದು. ಕೋತಿಯಿರುವ ಪಂಜರದೊಳಕ್ಕೆ ಒಂದು ಸಲಕರಣೆ ಅಥವಾ ಸಾಧನವನ್ನು ಇರಿಸಿದರೆ ಕೋತಿ ಅದರೊಂದಿಗೆ ಆಟವಾಡುತ್ತದೆ. ಅದನ್ನು ಬಿಡಿ ಬಿಡಿಯಾಗಿ ಬಿಚ್ಚುತ್ತದೆ. ಪುನಃ ಜೋಡಿಸುವ ಪ್ರಯತ್ನ ಮಾಡುತ್ತದೆ. ಈ ಒಂದು ಪರಿಹಾರ ಅನೇಕ ಗಂಟೆಗಳವರೆಗೆ ನಡೆಯಬಹುದು. ಈ ವರ್ತನೆಯಿಂದಾಗಿ ಅದಕ್ಕೆ ಅಹಾರವಾಗಲಿ, ಇನ್ನಾವುದೇ ಬಗೆಯ ಪ್ರತಿಫಲವಾಗಲಿ ದೊರಕುವುದಿಲ್ಲ. ಇಂಥಲ್ಲೆಲ್ಲ ಕುತೂಹಲ ತೃಪ್ತಿಯಷ್ಟೇ ಪ್ರತಿಫಲವಾಗಿರುತ್ತದೆ. ಎಂದಮೇಲೆ, ಜೀವಿಗಳು ತಮ್ಮ ಪರಿಸರದ ಬಗೆಗೆ ಸಹಜವಾಗಿ ಕುತೂಹಲವನ್ನು ಹೊಂದಿರುತ್ತದೆ. ಹಾಗೂ ತಮ್ಮ ಪರಿಸರವನ್ನು ಯಾವುದೇ ಉಪಯೋಗದ ಪ್ರಚೋದನೆಯಿಂದ ಪ್ರೇರಿತವಾಗದೆ, ಕುತೂಹಲ ತೃಪ್ತಿಗಾಗಿಯೇ ಅನ್ವೇಷಿಸುತ್ತವೆ. ಉನ್ನತ ಪ್ರಾಣಿವರ್ಗದಲ್ಲಿ, ಅದರಲ್ಲೂ ಮಾನವ ಜೀವಿಗಳಲ್ಲಿ, ಕುತೂಹಲ ಪ್ರವೃತ್ತಿ ಅಭಿಪ್ರೇರಣೆಯ ಪ್ರಮುಖ ನಿರ್ಧಾರಕವಾಗಿದೆ.

ವಿಲಿಯಂ ಮೆಗ್ಡುಗಲ್ ಎಂಬ ಮನೋವಿಜ್ಷಾನಿ ಮಾನವನಲ್ಲಿ ಕುತೂಹಲದ ಪ್ರಾಮುಖ್ಯವನ್ನು ಗುರುತಿಸಿದನಷ್ಟೇ ಅಲ್ಲದೆ, ಹುಟ್ಟಿನಿಂದ ಬಂದ ಕುತೂಹಲ ಸಾಮಥ್ರ್ಯದಲ್ಲಿ ವ್ಯಕ್ತಿಗತ ವ್ಯತ್ಯಾಸಗಳು ಇವೆಯೆಂದೂ ಹೇಳಿದ್ದಾನೆ. ಸ್ವಭಾವತಃ ಕೆಲವರು ಇತರರಿಗಿಂತ ಹೆಚ್ಚು ಕುತೂಹಲಿಗಳಾಗಿರುತ್ತಾರೆ. ಹುಟ್ಟಿನಿಂದ ಬಂದಂಥ ಈ ವ್ಯತ್ಯಾಸಗಳು ಜೀವನದ ಗತಿಯಲ್ಲಿ ವೃದ್ದಿಯಾಗುತ್ತ ಹೋಗುತ್ತವೆ. ಎಂದರೆ, ಯಾರಲ್ಲಿ ಕುತೂಹಲ ಶಕ್ತಿ ಕಡಿಮೆಯಿರುತ್ತದೆಯೋ ಅವರಲ್ಲಿ ಅದು ಅಷ್ಟಾಗಿ ಬಳಕೆಗೆ ಒದಗದ ಕಾರಣ ಇದ್ದ ಶಕ್ತಿಕೂಡ ಕ್ರಮೇಣ ಕುಂದುತ್ತ ಹೋಗುತ್ತವೆ. ಇದಕ್ಕೆ ವ್ಯತಿರಿಕ್ತವಾಗಿ, ಯಾರಲ್ಲಿ ಕುತೂಹಲಶಕ್ತಿ ಹೆಚ್ಚಿನ ಪ್ರಮಾಣದಲ್ಲಿರುತ್ತದೆಯೋ ಆತನಲ್ಲಿ, ಅದು ಹೆಚ್ಚು ಹೆಚ್ಚು ಬಳಕೆಗೆ ಒದಗುತ್ತದಾಗಿ ಇನ್ನೂ ವೃದ್ದಿಯಾಗುತ್ತ ಹೋಗುತ್ತದೆ ಈ ಎರಡನೆಯ ಗುಂಪಿನ ಜನರ ಬುದ್ದಿಶಕ್ತಿ ಕುದುರುವುದಕ್ಕೂ ಅವರು ಪ್ರತ್ಯಾಶೆಯಿಲ್ಲದ ಹೆಚ್ಚಿನ ದುಡಿಮೆಗಳಿಗೂ ಅವರಲ್ಲಿರುವ ಹೆಚ್ಚಿನ ಕುತೂಹಲಶಕ್ತಿ ಪ್ರಮುಖ ಆಧಾರವಾಗಿರಲಿಕ್ಕೂ ಸಾಕು. ಅಷ್ಟೇ ಅಲ್ಲದೆ, ಕುತೂಹಲ ವಿಜ್ಞಾನ ಹಾಗೂ ಮತ ಧರ್ಮಗಳಿಗೂ ಪ್ರಮುಖ ಆಧಾರವಾಗಿದೆ-ಎನ್ನುವುದು ಮೆಗ್ಡುಗಲನ ಅಭಿಪ್ರಾಯ.

ಕುತೂಹಲ ಸಾಮಥ್ರ್ಯ ವ್ಯಕ್ತಿಯಿಂದ ವ್ಯಕ್ತಿಗೆ ವಿಭಿನ್ನವಾಗಿರುತ್ತದೆ-ಎನ್ನುವ ಆಂಶವನ್ನು ರೆಮಾಂಡ್ ಕೆಟೆಲ್ ಎಂಬ ಸಂಶೋಧಕನೂ ಪ್ರತಿಪಾದಿಸಿದ್ದಾನೆ. ಆತ ನಡೆಸಿದ ಅಭಿಪ್ರೇರಣೆಯ ಮೇಲಿನ ಅಧ್ಯಯನಗಳಲ್ಲಿ ಅನ್ವೇಷಣೆ ಎಂದು ಕರೆಯಲಾಗುವ ಒಂದು ಆಕಾಂಕ್ಷೆಯನ್ನು (ವಾಂಟ್) ಗುರುತಿಸಿದ್ದಾನೆ. ಈ ಅನ್ವೇಷಣೆ ಅಥವಾ ಕುತೂಹಲಾಂಕ್ಷೆ ನಮ್ಮ ನಿತ್ಯಜೀವನದಲ್ಲಿ ನಾನಾ ರೀತಿಯಾಗಿ ಅಭಿವ್ಯಕ್ತಗೊಳ್ಳುತ್ತದೆ. ಪುಸ್ತಕ ಓದುವುದು, ಸುದ್ದಿ ಸಂಗ್ರಹಿಸುವುದು, ಸಂಗೀತ ಕೇಳುವುದು, ವಿಜ್ಞಾನದ ಬಗ್ಗೆ ಹೆಚ್ಚಾಗಿ ತಿಳಿದುಕೊಳ್ಳಲು ಪ್ರಯತ್ನಿಸುವುದು, ಸಿನೆಮಾ ಮತ್ತು ನಾಟಕಗಳನ್ನು ನೋಡುವುದು-ಇವುಗಳೆಲ್ಲ ಅನ್ವೇಷಣಾಕಾಂಕ್ಷೆಯನ್ನು ಪ್ರತಿಬಿಂಬಿಸುತ್ತವೆ.

ಬರ್ಲೈನ್ ಎಂಬ ಪ್ರಾಯೋಗಿಕ ಮನೋವಿಜ್ಞಾನಿ ಅನ್ವೇಷಣಾ ವರ್ತನೆಯನ್ನು ಮೂರು ಮಖ್ಯ ಗುಂಪುಗಳಾಗಿ ವಿಭಾಗಿಸಿದ್ದಾನೆ: ಅಭಿಮುಖ ಪ್ರತಿಕ್ರಿಯೆಗಳು (ಓರಿಯೆಂಟಿಂಗ್ ರೆಸ್ಪಾನ್ಸಸ್), ಚಲನಾತ್ಮಕ ಅನ್ವೇಷಣೆ (ಲೋಕೊಮೋಟಾರ್ ತನ್ನ ಪರಿಸರದಲ್ಲಿ ಉದ್ಭವಿಸುವ ಅಲ್ಪ ಬದಲಾವಣೆಗಳಿಗೆ ಸಹ ಸಂಬಂಧಪಟ್ಟ ತನ್ನ ಜ್ಞಾನೇಂದ್ರಿಯಗಳನ್ನು ನಿರ್ದೇಶಿಸುವ ಜೀವಿಯ ಹೊಂದಾಣಿಕೆಯ ಒಂದು ಪ್ರವೃತ್ತಿಯನ್ನು ಅಭಿಮುಖ ಪ್ರತಿಕ್ರಿಯೆಗಳಲ್ಲಿ ಕಾಣಬಹುದು. ಶಬ್ದ ಬಂದ ದಿಕ್ಕಿನತ್ತ ಜೀವಿ ತನ್ನ ಕತ್ತನ್ನು ತಿರುಗಿಸಬಹುದು. ಅದರ ಕಣ್ಣಿನ ಪಾಪೆ ಹಿಗ್ಗಬಹುದು. ಇದೇ ಮೊದಲಾದ ಇನ್ನೂ ಅನೇಕ ದೈಹಿಕ ಹೊಂದಾಣಿಕೆಗಳು ಉಂಟಾಗಬಹುದು. ಈ ಹೊಂದಾಣಿಕೆಗಳಿಂದಾಗಿ ಜೀವಿಯ ಅವಧಾನ ಮತ್ತು ಸಂವೇದನಾ ತೀಕ್ಷಣತೆ ಹೆಚ್ಚಾಗುತ್ತದೆ. ಈ ಅಭಿಮುಖ ಪ್ರತಿಕ್ರಿಯೆಗಳು ಜೀವಿ ತನ್ನ ಪರಿಸರದ ಬಗೆಗೆ ಹೆಚ್ಚು ತಿಳಿವಳಿಕೆ ಪಡೆಯಲು ಸಹಕಾರಿಯಾಗುತ್ತವೆ. ಚಲನಾತ್ಮಕ ಅನ್ವೇಷಣೆಯಲ್ಲಿ ಭೌತಿಕ ಚಲನೆಯಿರುತ್ತದೆ. ಬಗೆಬಗೆಯ ವಸ್ತುಗಳನ್ನೊಳಗೊಂಡಿರುವ ಕ್ಲಿಷ್ಟವಾದ ವ್ಯೂಹವೊಂದರ ಅನ್ವೇಷಣೆಯ ಸಲುವಾಗಿ, ವಿದ್ಯುತ್ ಘಾತ ಕೊಡುವ ನೋವನ್ನು ಸಹ ಸಹಿಸಿಕೊಂಡು ವಿದ್ಯುತ್ ಜಾಲವನ್ನು ದಾಟಿಕೊಂಡು ಹೋಗುವ ಇಲಿಗಳ ವರ್ತನೆ ಚಲನಾತ್ಮಕ ಅನ್ವೇಷಣೆಗೆ ಒಂದು ಉತ್ತಮ ನಿದರ್ಶನವಾಗಿದೆ.

ಅಭಿಮುಖಪ್ರತಿಕ್ರಿಯೆ ಹಾಗೂ ಚಲನಾತ್ಮಕ ಅನ್ವೇಷಣೆಗಳಲ್ಲಿ ತೊಡಗಿದ ಜೀವಿಯಲ್ಲಿ ಬದಲಾವಣೆ ಉಂಟಾಗುತ್ತದೆ. ಉದಾಹರಣೆಗೆ, ಕಣ್ಣಿನ ಪಾಪೆ ಹಿಗ್ಗುವಿಕೆ, ಪ್ರಚೋದವಸ್ತುವನ್ನು ಸಮೀಪಿಸುವುದು, ಇತ್ಯಾದಿ, ಅದರೆ ಕುತೂಹಲವನ್ನು ಪ್ರಚೋದಿಸುವ ವಸ್ತುವಿನಾಲ್ಲಾಗಲಿ ಅಂಥ ವಸ್ತು ಇರುವ ವಾತಾವರಣದಲ್ಲಿಯಾಗಲಿ ಯಾವುದೇ ಬಗೆಯ ಬದಲಾವಣೆಗಳು ಉಂಟಾಗುವುದಿಲ್ಲ. ಆದರೆ ಸಂಶೋಧನ ಪ್ರತಿಕ್ರಿಯೆಗಳ ವಿಚಾರವೇ ಬೇರೆ. ಈ ಪ್ರತಿಕ್ರಿಯೆಗಳು ಕುತೂಹಲವನ್ನು ಪ್ರಚೋದಿಸುವ ವಸ್ತುವಿನಲ್ಲಿ ಅಥವಾ ಆ ವಸ್ತುವಿಗೂ ಮತ್ತು ಜೀವಿಗೂ ನಡುವೆ ಇರುವ ಇನ್ನಾವುದೋ ವಸ್ತುವಿನಲ್ಲಿ ಬದಲಾವಣೆಯನ್ನುಂಟು ಮಾಡುತ್ತವೆ. ಕತ್ತಲೆಯಲ್ಲಿ ಯಾವುದೋ ಶಬ್ದವನ್ನು ಕೇಳಿದಾಗ, ಆ ಶಬ್ದದತ್ತ ಕಿವಿಯನ್ನು ತಿರುಗಿಸುವುದು ಅಭಿಮುಖ ಪ್ರತಿಕ್ರಿಯೆ. ಆ ಶಬ್ದ ಬಂದ ಸ್ಥಳದತ್ತ ಧಾವಿಸುವುದು ಚಲನಾತ್ಮಕ ಪ್ರತಿಕ್ರಿಯೆ, ಆದರೆ ಅದು ಏನು ಶಬ್ದ ಎಂದು ಖಚಿತವಾಗಿ ನಿರ್ಧರಿಸುವ ಸಲುವಾಗಿ ದೀಪವನ್ನು ಹಚ್ಚುವುದು ಅಥವಾ ರೇಡಿಯೋದ ಧ್ವನಿಯನ್ನು ಕಡಿಮೆ ಮಾಡುವುದು ಸಂಶೋಧನ ಪ್ರತಿಕ್ರಿಯೆ. ಕುತೂಹಲವನ್ನು ಕೆರಳಿಸುವ ವಸ್ತುವನ್ನು ಅಥವಾ ಅದಕ್ಕೆ ಸಂಬಂಧಿಸಿದ ವಾತಾವರಣವನ್ನು ಬಗೆಬಗೆಯಾಗಿ ನಿರ್ವಹಿಸಿ ಅವನ್ನು ಪರೀಕ್ಷಿಸುವ ಕೆಲಸ ಸಂಶೋಧನ ವರ್ತನೆಯಲ್ಲಿ ನಡೆಯುತ್ತದೆ.

 ತಮ್ಮ ಪರಿಸರದಲ್ಲಿ ತೋರಿಬರುವ ನವೀನ ವಸ್ತುಗಳನ್ನು ಬಗೆಬಗೆಯಾಗಿ ಪ್ರಯೋಗಿಸುವುದನ್ನು ಕೋತಿಗಳಲ್ಲಿ ಕಾಣುತ್ತೇವೆ. ಶಿಶುಗಳಲ್ಲಿ ಹಾಗೂ ಸ್ವಲ್ಪ ಬೆಳೆದ ಮಕ್ಕಳಲ್ಲಿ ಈ ಸಂಶೋಧನ ವರ್ತನೆ ಎಷ್ಟು ಸಾಧಾರಣವಾಗಿದೆಯೆಂದರೆ, ಅದಕ್ಕೆ ನಿದರ್ಶನಗಳು ಅನಾವಶ್ಯಕ. ಪಿಯಾಜೆ ಎಂಬ ಸಿದ್ಧಾಂತಿ ಹೇಳುವಂತೆ, ಮಗು ವಾತಾವರಣದಿಂದ ಪ್ರಭಾವಿತವಾಗುವುದೇ ಅಲ್ಲದೆ, ಅದು ವಾತಾವರಣದ ಮೇಲೆ ತನ್ನ ಪ್ರಭಾವವನ್ನು ಸಹ ಬೀರುತ್ತದೆ. ಸುಮಾರು ಐದರಿಂದ ಏಳು ತಿಂಗಳಿನ ಮಗು ತನ್ನ ದೃಷ್ಟಿಗೆ ಅಡ್ಡಿಬರುವ ಬಟ್ಟೆಯ ತುಂಡನ್ನು ಹಿಡಿದು ಎಳೆಯುತ್ತದೆ. ಸುಮಾರು ಎಂಟರಿಂದ ಹತ್ತು ತಿಂಗಳಿನ ಮಗು ತನ್ನ ಕಣ್ಣಿಗೆ ಬೀಳದ ವಸ್ತುವನ್ನು, ಅದು ಸಾಮಾನ್ಯವಾಗಿ ಕಂಡುಬರುವ ಸ್ಥಳದಲ್ಲಿಗೆ ಅರಸಿಕೊಂಡು ಹೋಗುತ್ತದೆ. ಸುಮಾರು ಹನ್ನೊಂದು ತಿಂಗಳಿನ ಸಮಯಕ್ಕೆ ಇನ್ನೂ ಹೆಚ್ಚು ಕ್ರಮಬದ್ಧವಾದ ಅನ್ವೇಷಣೆಯಲ್ಲದು ತೊಡಗುತ್ತದೆ. ಯಾವುದೋ ಒಂದು ಪ್ರಚೋದಕ ವಸ್ತುವಿನ ಮೇಲೆ ಬಗೆಬಗೆಯ ಪ್ರತಿಕ್ರಿಯೆಗಳ ಪರಿಣಾಮವನ್ನು ಅದು ಪರೀಕ್ಷಿಸುತ್ತದೆ. ಅಪರಿಚಿತ ವಸ್ತುವೊಂದನ್ನು ತಳ್ಳುತ್ತದೆ, ಒದೆಯುತ್ತದೆ, ಎತ್ತಿಎಸೆಯುತ್ತದೆ. ಹೀಗೆಲ್ಲ ಮಾಡುವುದರಿಂದ ಏನಾಗುತ್ತದೆ ಎಂದು ಕುತೂಹಲದಿಂದ ವೀಕ್ಷಿಸುತ್ತದೆ. ತನ್ನ ಪ್ರತಿಕ್ರಿಯೆಯಿಂದ ಉಂಟಾಗುವ ಪರಿಣಾಮದ ಸ್ಥಿರತೆಯನ್ನು ಪರೀಕ್ಷಿಸಲು ಪುನಃ ಒಂದೇ ಪ್ರತಿಕ್ರಿಯೆಯನ್ನು ವ್ಯಕ್ತಪಡಿಸಿ ಅದರ ಪರಿಣಾಮವನ್ನು ಅವಲೋಕಿಸುತ್ತದೆ. ಇನ್ನೂ ಹೆಚ್ಚಿನ ಮಟ್ಟದ ಬೆಳೆವಣಿಗೆಯನ್ನು ತಲಪಿದಾಗ ಕಾರ್ಯಕಾರಣ ಸಂಬಂಧಗಳನ್ನು ಹುಡುಕಿ ನೋಡುತ್ತದೆ.

 ಜೀವಿಯ ಕುತೂಹಲಬುದ್ಧಿ ಕೆರಳುವುದಕ್ಕೂ ಅದು ಬದುಕುವ ವಾತಾವರಣಕ್ಕೂ ಬಹುಮಟ್ಟಿನ ಸಂಬಂಧವಿದೆ. ಬಗೆಬಗೆಯ ವಸ್ತುಗಳಿಂದ ಕೂಡಿದ ಕ್ಲಿಷ್ಟವಾದ ಸಂದರ್ಭಗಳು ಆಶ್ಚರ್ಯವನ್ನು ಕೆರಳಿಸುತ್ತವೆ. ಮೆಗ್ಡುಗಲನ ಪ್ರಕಾರ ಆಶ್ಚರ್ಯ ಕುತೂಹಲಕ್ಕೆ ಸಂಬಂಧಿಸಿದ ಸಂವೇಗವಾಗಿದೆ. ಜೀವಿ ತಾನು ಅನುಭವಿಸುವ ಆಶ್ಚರ್ಯಕ್ಕೆ ವಿವರಣೆಗಳನ್ನು ಅದು ಅರಸುತ್ತದೆ. ಪ್ರಚೋದಕ ವಸ್ತುವಿನ ಯಾವ ಅಂಶಗಳು ಕುತೂಹಲ ಪ್ರತಿಕ್ರಿಯೆಯನ್ನು ಕೆರಳಿಸುತ್ತವೆ ಎನ್ನುವ ಬಗೆಗೆ ಅಧ್ಯಯನಗಳು ನಡೆದಿವೆ. ಪ್ರಚೋದಕವಸ್ತು ನವೀನವಾದಷ್ಟೂ ಕೂತೂಹಲ ಹೆಚ್ಚುತ್ತದೆ ಎಂಬುದು ಆ ಎಲ್ಲ ಅಧ್ಯಯನದ ತಿರುಳು. ನವೀನತೆ ಎನ್ನುವುದು ವೈಯಕ್ತಿಕ ವಿಚಾರ. ಯಾರಿಗೆ ಯಾವುದು ನವೀನವಾಗಿರುತ್ತದೆ ಎಂದು ಖಚಿತವಾಗಿ ಹೇಳಲಾಗದು. ಮುಖ್ಯವಾಗಿ, ಜೀವಿಯ ಜ್ಞಾನೇಂದ್ರಿಯಗಳಿಗೆ ಅಪರಿಚಿತವಾಗಿರುವ ವಸ್ತು ಅದಕ್ಕೆ ಹೊಸತಾಗಿ ಕಾಣುವುದು ಸಹಜ. ಬಹಳ ಸಮಯದಿಂದ ಅನುಭವಕ್ಕೆ ಬಾರದ ವಸ್ತುಗಳು ಸಹ ಹೊಸದಾಗಿ ಕಾಣುತ್ತವೆ. ಪರಿಚಯವಿಲ್ಲದುದರ ಜೊತೆಗೆ ವಸ್ತುವಿನ ಅಸಾಧಾರಣ ವಿನ್ಯಾಸಗಳು ಕೂಡ ಅವು ನವೀನವಾಗಿ ಕಾಣುವಂತೆ ಮಾಡುತ್ತವೆ. ನಾಲ್ಕು ಕಾಲಿನ ಪಕ್ಷಿ ಅಸಾಧಾರಣ ವಿನ್ಯಾಸಕ್ಕೊಂದು ಉದಾಹರಣೆಯಾಗಿದೆ. ಬರ್ಲೈನನ ಅಧ್ಯಯನಗಳಲ್ಲಿ ಪ್ರಚೋದಕವಸ್ತುವಿನ ನಾಲ್ಕು ಲಕ್ಷಣಗಳನ್ನು ಕುತೂಹಲ ಕೆರಳಿಕೆಯ ಪ್ರಮುಖ ನಿರ್ಧಾರಕಗಳಾಗಿ ಗುರುತಿಸಲಾಗಿದೆ. ಅವು ಅಸಂಬದ್ದತೆ (ಇನ್‍ಕಾಂಗ್ರುಯಿಟಿ), ಸಂಕೀರ್ಣತೆ (ಕಾಂಪ್ಲೆಕ್ಸಿಟಿ), ಅನಿರೀಕ್ಷತೆ (ಸರ್‍ಪ್ರೈಸ್) ಮತ್ತು ಅವ್ಯವಸ್ಥೆ (ಇರ್ರೆಗ್ಯುಲ್ಯಾರಿಟಿ).

 ಪ್ರಚೋದಕ ವಸ್ತುವಿನಿಂದಾಗಲಿ ಅನ್ವೇಷಣೆಯ ಗತಿಯಲ್ಲಿ ಇನ್ನಾವುದೇ ವಸ್ತುವಿನಿಂದಲಾಗಲಿ ಸಂಭವಿಸಬಹುದಾದ ನೋವು ಅಥವಾ ಭಯ ಸಂಶೋಧನೆಯ ಮುಂದುವರಿಯುವಿಕೆಗೆ ಅಡ್ಡಿಯಾಗುತ್ತದೆ. ಮಾಂಟೆಗೋಮರಿ ಮತ್ತು ಮಾಂಕ್‍ಮನ್ ಎಂಬ ಸಂಶೋಧಕರು ನವೀನ ತೆರನಾದ ವ್ಯೂಹವೊಂದಕ್ಕೆ ವಿದ್ಯುತ್‍ಘಾತವನ್ನು ಹರಿಯಬಿಟ್ಟಾಗ ಆ ವ್ಯೂಹದ ಅನ್ವೇಷಣೆಯಲ್ಲಿ ತೊಡಗಿದ್ದ ಪ್ರಾಣಿಗಳ ಅನ್ವೇಷಣಾ ವರ್ತನೆ ಕಡಿಮೆಯಾಯಿತು. ಇದೇ ರೀತಿಯಾಗಿ ಹೆದರಿಕೆಯೂ ಕುತೂಹಲವನ್ನು ಕುಗ್ಗಿಸುತ್ತದೆ. ಬಾಗಿಲನ್ನು ತೆರೆದು ಹೊರಕ್ಕೆ ನೋಡುತ್ತಿದ್ದ ಕೋತಿಗಳು ನಾಯಿಗಳು ಬೊಗಳಿದೊಡನೆ ಹಾಗೆ ಮಾಡುವುದನ್ನು ನಿಲ್ಲಿಸಿದುದಾಗಿ ಬಟ್ಲರ್ ಎಂಬ ಸಂಶೋಧಕ ವರದಿ ಮಾಡಿದ್ದಾನೆ. ಅಪರಿಚಿತ ಪ್ರಾಣಿಯನ್ನು ನೋಡುವುದು ಅಥವಾ ಅದರ ಶಬ್ದವನ್ನು ಕೇಳುವುದು ಭಯೋತ್ಪಾದನೆಗೆ ಕಾರಣವಾಗುತ್ತದೆ. ಅನ್ವೇಷಣೆಯ ಗತಿಯಲ್ಲಿ ನೋವನ್ನು ಎದುರಿಸಿದಾಗ ಮಕ್ಕಳು ಮತ್ತು ವಯಸ್ಕರಲ್ಲಿ ಸಹ ಕುತೂಹಲದ ಅಭಿವ್ಯಕ್ತಿ ನಿಂತು ಹೋಗುತ್ತದೆ. ಆದರೆ ಹಾನಿ ಅಷ್ಟಾಗಿ ಉಂಟಾಗದಿದ್ದರೆ, ಬೇರೆ ಮಾರ್ಗಗಳನ್ನು ಅನುಸರಿಸಿ ಕುತೂಹಲಕಾರಿ ವಸ್ತುವಿನ ಅನ್ವೇಷಣೆಯನ್ನು ಜೀವಿ ಮುಂದುವರಿಸಬಹುದು. ಅಷ್ಟೇ ಅಲ್ಲದೆ, ನೋವಿಗೆ ಕಾರಣವಾದ ವಸ್ತುವಿನ ಬಗೆಗೆ ಇನ್ನೂ ಹೆಚ್ಚಿನ ಕುತೂಹಲವನ್ನು ತಳೆಯಲೂಬಹುದು.        

(ಎಚ್.ಎಸ್.ಐ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ